ಕೈಗಾರಿಕೆಗಳಲ್ಲಿ ಕಾರ್ಮಿಕರ ಶೋಷಣೆ, ದೌರ್ಜನ್ಯ ತಡೆಗೆ ಕಠಿಣ ಕ್ರಮ: ಕಾರ್ಮಿಕ ಸಚಿವ ಸಂತೋಷ್ ಲಾಡ್

ಸುವರ್ಣಸೌಧ, ಬೆಳಗಾವಿ, ಡಿಸೆಂಬರ್ 12: ಕೈಗಾರಿಕೆಗಳಲ್ಲಿನ ಕಾರ್ಮಿಕರ ಶೋಷಣೆ ಹಾಗೂ ದೌರ್ಜನ್ಯ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಭರವಸೆ ನೀಡಿದರು.
ಈ ಸಂಬಂಧ ಶಾಸಕರಾದ ಶ್ರೀ ಸುರೇಶ್ ಗೌಡ ಅವರು ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೈಗಾರಿಕಾ ಕಾರ್ಮಿಕ ಕಾಯ್ದೆ ಮತ್ತು ಕೈಗಾರಿಕಾ ವಿವಾದ ಕಾಯ್ದೆಗಳನ್ನು ಕೈಗಾರಿಕೆಗಳಲ್ಲಿ ಅಳವಡಿಕೆ ಮಾಡುತ್ತಿಲ್ಲ. ಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕರು ಶಾಲೆ, ಆಸ್ಪತ್ರೆ ಮತ್ತಿತರರ ಮೂಲಸೌಕರ್ಯಗಳಿಗೆ ಮನವಿ ಸಲ್ಲಿಸಲು ಮುಂದಾದರೆ ಪ್ರಕರಣ ದಾಖಲಿಸುತ್ತಾರೆ. ಕೆಲಸದಿಂದ ವಜಾ ಮಾಡುತ್ತಾರೆ. ಐಟಿಐ, ಡಿಪ್ಲೊಮಾ ಅಧ್ಯಯನ ಮಾಡಿದವರಿಗೆ ಸರಿಯಾದ ವೇತನ ನೀಡದೆ ಕೆಲಸದಿಂದ ತೆಗೆಯುತ್ತಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ಸಂತೋಷ್ ಲಾಡ್ ಅವರು, ಸರ್ಕಾರ ಕಾರ್ಮಿಕರ ಪರವಾಗಿದೆ. ಬಾಷ್ ಮತ್ತು ಟೊಯೋಟಾ ಕಂಪನಿಗಳಲ್ಲಿ ಕಾರ್ಮಿಕರ ಮೇಲೆ ಮೊಕದ್ದಮೆ ಹೂಡಿದ್ದಾರೆ ಎಂಬ ದೂರುಗಳಿವೆ. ಕೆಲಸದಿಂದ ವಜಾ ಮಾಡಿದವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂಬ ಬೇಡಿಕೆಗಳಿವೆ. ಸಂಧಾನದ ಮುಖಾಂತರ ಇದಕ್ಕೆ ಪರಿಹಾರ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವಿಷಯದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರು, ಟೊಯೊಟೊ ಮತ್ತು ಬಾಷ್ ಕಂಪನಿಗಳಲ್ಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಾಗ ಕಾರ್ಮಿಕ ಇಲಾಖೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಭೇಟಿ ನೀಡಿ ರಕ್ಷಣೆ ಮಾಡಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಲಾಡ್ ಅವರು, ರಾಜ್ಯದ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ. ಕಾರ್ಮಿಕರ ಸಮಸ್ಯೆ ಅರಿಯುವ ಪ್ರಯತ್ನ ಮಾಡಿದ್ದೇನೆ. ನಿರ್ದಿಷ್ಟವಾದ ಪ್ರಕರಣ ಗಮನಕ್ಕೆ ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಮಿಕರ ರಕ್ಷಣೆಗೆ ನಮ್ಮ ಸರ್ಕಾರ ಹಾಗೂ ಇಲಾಖೆ ಬದ್ಧವಾಗಿದೆ ಎಂದು ವಿವರಿಸಿದರು.