ಹುಡುಗಿ ವಿಷಯಕ್ಕೆ ಬೆಂಕಿ ಹಚ್ಚಿಕೊಂಡ ಪ್ರವೀಣ್…

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಯುವಕನೊರ್ವ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಪ್ರವೀಣ್ ಭರಮಪ್ಪ ಬೆಟದೂರು (25) ಎಂಬಾತನೇ ಪೆಟ್ರೋಲ್ ಸುರಿದುಕೊಂಡಿದ್ದು, ಈತ ಉಡುಪಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಇನ್ನು ಗುರುವಾರ ಬೆಳಗಲಿ ಗ್ರಾಮಕ್ಕೆ ಬರುವುದಾಗಿ ಮನೆಯಲ್ಲಿ ತಿಳಿಸಿದ್ದಾನೆ. ಅದರಂತೆ ಇಂದು ತಡಸದ ತಾಯಮ್ಮ ದೇವಸ್ಥಾನ ಹತ್ತಿರ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಇಟ್ಟುಕೊಂಡಿದ್ದಾನೆ.
ಪರಿಣಾಮ ಪ್ರವೀಣ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಇನ್ನು ವಿಷಯ ತಿಳಿದು ಸ್ಥಳೀಯ ಪೊಲೀಸರು ಗಂಭೀರವಾಗಿ ಗಾಯಗೊಂಡ ಪ್ರವೀಣನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.