Uncategorized

ಉಪನಗರ ಪೊಲೀಸರು ಹಾಗೂ ದುರ್ಗಾದೇವಿ ಶಾಲೆಯ ಸಹಯೋಗದಲ್ಲಿ ಅಪರಾಧ ಮಾಸಾಚರಣೆ ಜಾಗೃತಿ ಜಾಥಾ……

ಹುಬ್ಬಳ್ಳಿ: ಇಲ್ಲಿನ ದುರ್ಗಾ ದೇವಿ ಶಾಲೆ ಹಾಗೂ ಹುಬ್ಬಳ್ಳಿಯ ಉಪನಗರ ಪೊಲೀಸ ಠಾಣೆಯ ಪೊಲೀಸರ ಸಹಯೋಗದಲ್ಲಿ ಗುರುವಾರ ಅಪರಾಧ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾ ಮಾಡಲಾಯಿತು.

ಉಪನಗರ ಠಾಣೆಯ ಇನ್‌ಸ್ಪೆಕ್ಟರ್ ಎಮ್. ಎಸ್.ಹೂಗಾರ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದರು.

ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ತಿಂಗಳು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ, ಆಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಈ ತಿಂಗಳಿನಲ್ಲಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವುದು, ಕರಪತ್ರಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ಯಾವುದೇ ಅಪರಾಧವನ್ನು ಕಂಡಿದ್ದ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ನಗರ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆ ಊರುಗಳಿಗೆ ತೆರಳುವಾಗ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು. ಪೊಲೀಸರನ್ನು ಕಂಡು ಭಯಪಡುವ ಮತ್ತು ಪೊಲೀಸ್ ಠಾಣೆಗಳಿಗೆ ಹೋದರೆ ಅವಮಾನ ಎನ್ನುವ ಕಾಲ ಬದಲಾಗಿದೆ ಎಂದು ಹೇಳಿದರು.

ಪೊಲೀಸರು ಜನಸ್ನೇಹಿಗಳಾಗಿ ಸದಾ ಸಾರ್ವಜನಿಕರ ಪ್ರಾಣ, ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ಶ್ರಮಿಸುತ್ತಾರೆ. ಅಪರಾಧಗಳ ತಡೆಗೆ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಸಂಚರಿಸಿ ಅಪರಾಧ ಮಾಸಾಚರಣೆ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು , ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!