ಬಡ್ಡಿ ಕಿರುಕುಳ -ಪ್ರಕಾಶ ಸಾವಿನ ತನಿಖೆ ಎಲ್ಲಿಗೆ ಬಂತು????

ಇಲ್ಲಿನ ಗದಗ ರಸ್ತೆಯ ವಿನೋಭಾ ನಗರದ ನಿವಾಸಿ ಹಾಗೂ ರೈಲ್ವೆ ಸಿಬ್ಬಂದಿಯಾಗಿದ್ದ ಪ್ರಕಾಶ ಕೋಮಲಪಟ್ಟಿ ಎಂಬಾತ ಸಾಲಗಾರರ ಬಡ್ಡಿ ಕಿರುಕುಳ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಶ್ವಾಪುರ ಪೊಲೀಸರು ಆರೋಪಿಗಳಾದ ಜಂಗಲ್ ಬಾಬು ಅಲಿಯಾಸ್ ಹಾಗೂ ವಿನಾಯಕ ಸಾವಂತ ಎಂಬಾತರನ್ನು ಬಂಧಿಸಿದ್ದಾರೆ. ಆದರೆ ಇನ್ನುಳಿದ ಆರೋಪಿಗಳ ಬಂಧನ ಮಾತ್ರ ಸಾಧ್ಯವಾಗಿಲ್ಲ, ಹೀಗಾಗಿ ಪೊಲೀಸರು ತಮಗೆ ನ್ಯಾಯ ಒದಗಿಸಬೇಕೆಂದು ಮೃತ ಕುಟುಂಬಸ್ಥರು ಅಳಲು ತೊಡಿಕೊಂಡಿದ್ದಾರೆ.
ಅಂದ ಹಾಗೇ ಕಳೆದ ಕೆಲವು ದಿನಗಳ ಹಿಂದೆ ಪ್ರಕಾಶ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದ, ಮೊದಮೊದಲು ಈತನ ಸಾವನ್ನು ಅಸಹಜ ಸಾವು ಎಂದು ಪರಿಗಣಿಸಿದ ಪೊಲೀಸರು, ಬಳಿಕ ತನಿಖೆ ನಡೆಸಿದಾಗ ಪ್ರಕಾಶ ಸಾವಿಗೆ ಕೆಲವು ಜನರ ಪ್ರಚೋದನೆ ಕಾರಣ ಎಂದು ತಿಳಿದುಬಂದಿದೆ. ಈ ವೇಳೆ ಡೆತ್ ನೋಟ್ ಸಹ ಸಿಗುತ್ತದೆ. ಅದರಲ್ಲಿ ಜಂಗಲ ಬಾಬು, ಮಂಜು ಜಾಧವ್, ವಿನಾಯಕ ಸಾವಂತ, ಕಾಕಾರಾಜ, ದಾಸರಿ ಜಾನ್, ದಾಸರಿ ಹೇಮಾ ಹಾಗೂ ರೂಪಾ ಎಂಬಾತರ ಹೆಸರು ಬರೆಯಲಾಗಿತ್ತು, ಹೀಗಾಗಿ ಪ್ರಕಾಶನ ಪತ್ನಿ ತನ್ನ ಗಂಡನ ಸಾವಿಗೆ ನೇರವಾಗಿ ಇವರುಗಳೇ ಕಾರಣ ಎಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕಳೆದ ಏಪ್ರಿಲ್ 8 ರಂದು ಪ್ರಕರಣ ದಾಖಲಿಸಿದ್ದರು.
ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023 (U/S 108, 115 (2), 308 (2) ), ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೇಶ್ವಾಪುರ ಪೊಲೀಸರು ತನಿಖೆ ನಡೆಸಿ, ಶೀಘ್ರವೇ ಆರೋಪಿ ಜಂಗಲ್ ಬಾಬು, ವಿನಾಯಕ ಸಾವಂತ ಎಂಬಾತರನ್ನು ಬಂಧಿಸುತ್ತಾರೆ. ಇನ್ನುಳಿದವರು ಪರಾರಿಯಾಗಿದ್ದಾರೆ, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುದ್ದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಇಷ್ಟಾದರೂ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳ ಬಂಧನ ಮಾತ್ರವಾಗಿಲ್ಲ, ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ, ಹೀಗಾಗಿ ದಕ್ಷ ಕಮಿಷನರ್ ಎನ್.ಶಶಿಕುಮಾರ್ ಈ ಬಗ್ಗೆ ಗಮನ ಹರಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತ ಪ್ರಕಾಶನ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಈಗಲಾದರೂ ಕೇಶ್ವಾಪುರ ಪೊಲೀಸರು ಇನ್ನುಳಿದ ಆರೋಪಿಗಳನ್ನು ಬಂಧಿಸಿ, ಪ್ರಕಾಶ ಸಾವಿಗೆ ನ್ಯಾಯ ಒದಗಿಸುವ ಕಾರ್ಯ ಮಾಡತ್ತಾರಾ? ಕಾದು ನೋಡಬೇಕು.