ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿಡಲು ಒತ್ತಾಯಿಸಿ ಜೋಶಿ ಮನೆಗೆ ಭೇಟಿ ನೀಡಿದ ಬಿಜೆಪಿ ಮುಖಂಡರು

ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಈಗಾಗಲೇ ಎರಡು ಲಿಸ್ಟ್‌ನ್ನು ಬಿಟ್ಟಿದ್ದಾರೆ. ಆದ್ರೆ ಸತತ ಗೆಲುವಿನ ಹಾದಿಯಲ್ಲಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದ ಕಾರಣ, ಇಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಶೆಟ್ಟರ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಗೆಲುವಿನ ಸರದಾರ ಎಂದು ಕರೆಸಿಕೊಂಡಿರುವ ಜಗದೀಶ್ ಶೆಟ್ಟರ್ ಅವರಿಗೆ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಇನ್ನೂವರೆಗೂ ಟಿಕೆಟ್ ನೀಡಿಲ್ಲ. ಈಗಾಗಲೇ ಜಗದೀಶ್ ಶೆಟ್ಟರ್ ಅವರು ದೆಹಲಿಗೆ ಹೋಗಿ ರಾಷ್ಟ್ರ ನಾಯಕರನ್ನು ಭೇಟಿ ನೀಡಿ ಕೂಡ ಬಂದಿದ್ದಾರೆ.
ರಾಷ್ಟ್ರ ನಾಯಕರು ಕೂಡ ಟಿಕೆಟ್ ನೀಡುತ್ತೇವೆಂದು ಭರವಸೆ ಕೂಡ ನೀಡಿದ್ದಾರಂತೆ. ಇಂದು ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಸಚಿವ ಜೋಶಿ ಅವರ ಮನೆಗೆ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರಗಿ, ಉಪ ಮಹಾಪೌರರು ಉಮಾ ಮುಕುಂದ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ರಾಜಣ್ಣ ಕೊರವಿ, ಮೀನಾಕ್ಷಿ ಒಂಟಮುರಿ, ಹಲವರು ತೆರಳಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ಒತ್ತಾಯಿಸಿದರು.