ಆಡಿಯೋ ಕೇಳಿ… ಸಿನಿಮಾ ಶೀರ್ಷಿಕೆ ಹೇಳಿ..ಮಯೂರ ಕಡಿ

ಕಳೆದ ವಾರ ವಿಶಿಷ್ಟವಾದ ‘ಆಡಿಯೋ ಕೇಳಿ – ಸಿನಿಮಾ ಶೀರ್ಷಿಕೆ ಹೇಳಿ’ ಅಭಿಯಾನವನ್ನ ರಾಜ್ಯಾದ್ಯಂತ ಶುರು ಮಾಡಿ ಜನರಿಗೆ ಒಂದು ಮ್ಯೂಸಿಕ್ ಕೇಳಿ ತಮ್ಮ ಚಲನಚಿತ್ರದ ಶೀರ್ಷಿಕೆ ಊಹಿಸುವಂತೆ ಹೇಳಿ, ನಂತರ ನೂರಕ್ಕೂ ಹೆಚ್ಚು ವಿಜೇತರನ್ನ ಘೋಷಿಸಿದ್ದ ಚಿತ್ರತಂಡ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ರವಿವಾರ ಅಂದರೆ 26/01/2025 ರಂದು ರಾತ್ರಿ 08.08 ಘಂಟೆಗೆ ಕರ್ನಾಟಕದ ಚಿತ್ರಮಂದಿರಗಳು ತಮ್ಮ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸುತ್ತವೆ ಎಂದು ಅವರು ಈಗ ಘೋಷಿಸಿದ್ದಾರೆ. ಆದರೆ ಅದು ಹೇಗೆ ಎಂದು ಕಾದು ನೋಡಬೇಕಿದೆ.

ಈ ಚಲನಚಿತ್ರ ಮಹೇಶ್ವರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗಿದೆ. ಈ ಹಿಂದೆ ಹುಬ್ಬಳ್ಳಿ ಧಾರವಾಡದ ರೇಡಿಯೋ ಜಾಕಿ ಆಗಿದ್ದ ಮಯೂರ್ ಕಡಿ ಅವರ ನಿರ್ದೇಶನ ಮತ್ತು ನಟನೆಯ ಚೊಚ್ಚಲ ಚಿತ್ರ ಇದಾಗಿದೆ. ಉಲ್ಲಾಸ್ ಕುಲಕರ್ಣಿ ಅವರ ಸಂಗೀತ ಮತ್ತು ಪ್ರಸನ್ನ ಕುಮಾರ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ತಾರಾಗಣದಲ್ಲಿ ಮಯೂರ್ ಜೊತೆಯಲ್ಲಿ ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಚಂದ್ರ, ಚೇತನ್, ವಿದ್ಯಾಸಾಗರ ದೀಕ್ಷಿತ್, ಸುನಿಲ್ ಪತ್ರಿ, ಜ್ಯೋತಿ ಪುರಾಣಿಕ್, ಕಾರ್ತಿಕ್ ಪತ್ತಾರ್ ಮತ್ತು ಮುಂತಾದವರಿದ್ದಾರೆ. ಚಿತ್ರದ ಕಥೆಯಲ್ಲಿ ನಾಯಕ ಉತ್ತರ ಕರ್ನಾಟಕದ ರೇಡಿಯೋ ಜಾಕಿ ಆಗಿರುತ್ತಾನೆ. ನಾಯಕಿ ಮೈಸೂರಿನಿಂದ ಧಾರವಾಡಕ್ಕೆ ಆಗಮಿಸುತ್ತಾಳೆ. ಅವರು ಪರಸ್ಪರ ಭೇಟಿಯಾದಾಗ ನಡೆಯುವ ಸನ್ನಿವೇಶಗಳು ಮತ್ತು ತಿರುವುಗಳೇ ಚಿತ್ರದ ಮೂಲ ಕಥಾವಸ್ತು ಆಗಿವೆ. ಈ ಚಲನಚಿತ್ರ
ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಟೈಟಲ್ ಬಿಡುಗಡೆಯಾದ ಒಂದು ವಾರದ ನಂತರ ಚಿತ್ರದ ಫರ್ಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.